ಮುಸ್ಲಿಮರಲ್ಲಿ ಹೆಚ್ಚಿನವರು ಜನಾಂಗೀಯ ಹಿಂದೂಗಳೇ ಆಗಿದ್ದಾರೆ- ಸಾವರ್ಕರ್

(ಹಿಂದಿನ ಸಂಚಿಕೆಯಲ್ಲಿ – “ಹಿಂದೂತ್ವ” ಹೊತ್ತಗೆಯನ್ನು ಸಾವರ್ಕರ್ ಅವರು 1921 ರಲ್ಲಿ ರತ್ನಗಿರಿ ಜೈಲಿನಲ್ಲಿ ಕುಳಿತು ಬರೆಯುವಾಗ ಮುಂದೊಂದು ದಿನ ಇದು ಹಿಂದೂತ್ವವಾದಿಗಳ ಪಾಲಿಗೆ ಜ್ಞಾನಕೋಶವೇ ಆಗಬಹುದು ಎನ್ನುವ ಸಂಕಲ್ಪ ದೇವರಲ್ಲಿಯೇ ಇದ್ದಿರಬಹುದು. ಮುಂದುವರೆಯುವುದು)

ಕೆಲವರು ಸಂಸ್ಕೃತ ಪಠ್ಯಗಳಲ್ಲಿ ಹಿಂದೂ ಎನ್ನುವ ಶಬ್ದ ಯಾಕಿಲ್ಲ ಎಂದು ಸಾವರ್ಕರ್ ಅವರ ಬಳಿ ವಾದಿಸಿದ್ದೂ ಇದೆ. ಅದಕ್ಕೆ ಸಾವರ್ಕರ್ ಅವರು ವಾರಣಾಸಿ ಹಾಗೂ ಬನಾರಸ್ ಉದಾಹರಣೆಯನ್ನು ನೀಡುತ್ತಿದ್ದರು. ಒಂದು ಶಬ್ದ ಪ್ರಾಕೃತವಾಗಿದ್ದರೆ ಅದು ಸಂಸ್ಕೃತದಲ್ಲಿ ಬರುವುದಿಲ್ಲ. ಹಿಂದೂ ಎನ್ನುವುದು ಪ್ರಾಕೃತ ಶಬ್ದವಾಗಿರುವುದರಿಂದ ಸಂಸ್ಕೃತದಲ್ಲಿ ಅದರ ಉಲ್ಲೇಖ ಇಲ್ಲ. ಹಾಗೆ ಕಿಶನ್, ಜಮುನಾ, ಸಿಯಾ ಶಬ್ದಗಳು ಪ್ರಾಕೃತವಾಗಿರುವುದರಿಂದ ಅವು ಸಂಸ್ಕೃತದಲ್ಲಿ ಕಾಣಿಸುವುದಿಲ್ಲ ಎಂದು ಪ್ರತಿಪಾದಿಸಿದ್ದಾರೆ. ಹಿಂದೂ ಧರ್ಮವನ್ನು ಬಿಟ್ಟು ಇಸ್ಲಾಂಗೆ ಮತಾಂತರಗೊಂಡಿರುವ ಮೊದಲ ತಲೆಮಾರಿನ ವ್ಯಕ್ತಿಗಳಾದ ಬೋಹ್ರಾ ಮತ್ತು ಖೋಜಾ ಮುಸ್ಲಿಂ ಸಮುದಾಯಗಳು ವಿಷ್ಣುವಿನ ದಶಾವತಾರವನ್ನು ತಮ್ಮ ಹೀರೋಗಳೆಂದು ಪೂಜಿಸುತ್ತವೆ ಎಂದು ಸಾವರ್ಕರ್ ತಮ್ಮ ಹಿಂದೂತ್ವ ಗ್ರಂಥದ ಪುಟ 63 ರಲ್ಲಿ ಬರೆದಿದ್ದಾರೆ. ಹೀಗಾಗಿ ಮುಸ್ಲಿಮರ ಪೈಕಿ ಹೆಚ್ಚಿನವರು ಜನಾಂಗೀಯ ಹಿಂದೂಗಳೇ ಆಗಿದ್ದಾರೆ. ಇಷ್ಟಕ್ಕೂ ಇವರ ಪೂರ್ವಜರನ್ನೆಲ್ಲ ಬಲಾತ್ಕಾರವಾಗಿ ಇಸ್ಲಾಮಿಗೆ ಮತಾಂತರಿಸಲಾಗಿದೆ. ಅವರನ್ನು ಖಡ್ಗವನ್ನು ತೋರಿಸಿ, ಬೆದರಿಸಿ ಮತಾಂತರ ಮಾಡಲಾಗಿದೆ. ಇದರಿಂದ ನಾವು ನಮ್ಮ ಸಹೋದರರನ್ನು ಕಳೆದುಕೊಂಡಿದ್ದೇವೆ. ಆದ್ದರಿಂದ ಹೀಗೆ ಮತಾಂತರವಾಗಿ ಹೋಗಿರುವವರೆಲ್ಲರೂ ಮತ್ತೆ ಹಿಂದೂ ಧರ್ಮಕ್ಕೆ ಬರಬೇಕು. ನಿಮ್ಮನ್ನು ತೆರೆದ ತೋಳುಗಳಿಂದ ಸ್ವಾಗತಿಸಲು ಹಿಂದೂ ಸಹೋದರರು-ಸಹೋದರಿಯರು ಕಾಯುತ್ತಿದ್ದಾರೆ ಎಂದು ಸಾವರ್ಕರ್ ಪ್ರತಿಪಾದಿಸತೊಡಗಿದರು.

ಮುಸ್ಲಿಮರಿಗೆ ಆಗಲಿ, ಕ್ರೈಸ್ತರಿಗೆ ಆಗಲಿ ಭಾರತದಲ್ಲಿ ಇರುವಷ್ಟು ಮುಕ್ತವಾದ ಧಾರ್ಮಿಕ ಸ್ವಾತಂತ್ರ್ಯವು ಜಗತ್ತಿನ ಬೇರೆ ಯಾವ ದೇಶದಲ್ಲಿಯೂ ಸಿಗುವುದಿಲ್ಲ. ಹೇಗೆಂದರೆ ಭಾರತ ದೇಶದಲ್ಲಿರುವ ದೇವಾಲಯದ ಆವರಣದಲ್ಲಿ ನಿಂತುಕೊಂಡೇ ದೇವರೇ ಇಲ್ಲ ಎಂದು ಭಾಷಣ ಮಾಡಬಹುದು. ಇಂತಹ ಮುಕ್ತತೆ ಬೇರೆ ಕಡೆ ಸಿಗಲು ಸಾಧ್ಯವೇ ಎಂದು ಅವರು ಕೇಳಿದ್ದರು. ಆದರೆ ಮುಸ್ಲಿಮರು ಮತ್ತು ಕ್ರೈಸ್ತರು ಹಿಂದೂಗಳ ಜೊತೆ ಒಂದಾಗಬೇಕೆಂದರೆ ನಮ್ಮೆಲ್ಲರ ಭಾರತವನ್ನು ತಮ್ಮ ಪಾಲಿನ ಪುಣ್ಯಭೂಮಿ (ಹೋಲಿ ಲ್ಯಾಂಡ್) ಎಂದು ಒಪ್ಪಿಕೊಳ್ಳಬೇಕು. ಅವರು ಇಷ್ಟನ್ನು ಮಾಡಿದರೆ ಸಾಕು. ಅವರನ್ನು ಹಿಂದೂಗಳ ತೆಕ್ಕೆಗೆ ಅತ್ಯಂತ ಗೌರವಪೂರ್ವಕವಾಗಿ ಸ್ವಾಗತಿಸಲಾಗುವುದು ಎಂದು ಸಾವರ್ಕರ್ ಹೇಳುತ್ತಿದ್ದರು. ಬೇರೆ ಬೇರೆ ಧರ್ಮ ಅಥವಾ ಮತಗಳಿಗೆ ಮತಾಂತರಗೊಂಡಿದ್ದ ಹಿಂದೂಗಳನ್ನು ಪುನ: ಹಿಂದೂ ಧರ್ಮಕ್ಕೆ ಕರೆತರಬೇಕು ಎನ್ನುವುದನ್ನು ಸಾವರ್ಕರ್ ಉತ್ಕಟವಾಗಿ ನಂಬಿದ್ದರು. ಅದಕ್ಕಾಗಿ ಅವರು ದಯಾನಂದ ಸರಸ್ವತಿಗಳ ಆರ್ಯ ಸಮಾಜದಿಂದ ಸ್ಫೂರ್ತಿ ಪಡೆದು “ಶುದ್ಧಿ” ಆಂದೋಲನವನ್ನು ಎರವಲು ತೆಗೆದುಕೊಂಡಿದ್ದರು. ಅದರಂತೆ ಅವರು, ಕ್ರೈಸ್ತ ಮತಕ್ಕೆ ಮತಾಂತರಗೊಂಡಿದ್ದ ಒಂದು ಮಹಾರ್ ಹಾಗೂ ಎಂಟು ಮಂದಿಯನ್ನೊಳಗೊಂಡ ಬ್ರಾಹ್ಮಣ ಕುಟುಂಬವೊಂದನ್ನು ತಮ್ಮ ತಮ್ಮ ನೇತೃತ್ವದಲ್ಲಿ 1926 ರಲ್ಲಿ ಹಿಂದೂ ಧರ್ಮಕ್ಕೆ ಮರುಮತಾಂತರಗೊಳಿಸಿದರು. ಹೀಗೆ ತಮ್ಮನ್ನು ಮಾತೃಧರ್ಮಕ್ಕೆ ಮರಳಿ ಕರೆತಂದಿದ್ದಕ್ಕಾಗಿ ಸಾವರ್ಕರ್ ಅವರಿಗೆ ಕೃತಜ್ಞತೆ ಸಲ್ಲಿಸಿದ ಆ ಬ್ರಾಹ್ಮಣ ಕುಟುಂಬದ ಯಜಮಾನನು ” ನನ್ನ ಕೊನೆಯ ಮಗಳ ಮದುವೆಯಲ್ಲಿ ನೀವೆ ಬಂದು, ತಂದೆಯ ಸ್ಥಾನದಲ್ಲಿ ನಿಂತು, ಕನ್ಯಾದಾನವನ್ನು ನೆರವೇರಿಸಿಕೊಡಬೇಕು” ಎಂದು ವಿನಂತಿಸಿದರೂ ಅದನ್ನು ಒಪ್ಪದೆ ಆ ಹುಡುಗಿ ಹಾಗೂ ಆಕೆಯ ಅಕ್ಕನ ಮದುವೆಯ ಸಂಪೂರ್ಣ ಖರ್ಚನ್ನು ಮಾತ್ರ ಸಾವರ್ಕರ್ ತಾವೇ ವಹಿಸಿಕೊಂಡರು. ಈ ಶುದ್ಧಿ ಕಾರ್ಯವು ತುಂಬಾ ಸವಾಲಿನದ್ದು ಆಗಿತ್ತು. ಆದರೂ ಅವರು ಅದರಿಂದ ವಿಮುಖರಾಗಲಿಲ್ಲ.

(ಸೆಲ್ಯೂಲರ್ ಜೈಲಿನಲ್ಲಿ ಸಾವರ್ಕರ್ ಅವರು ತಮ್ಮ ಸೆಲ್ ನಲ್ಲಿಯೇ ಅಸಂಖ್ಯಾತ ಕವನಗಳನ್ನು ರಚಿಸಿದರು. ತಮ್ಮಲ್ಲಿ ಉಕ್ಕಿ ಬರುತ್ತಿದ್ದ ಕಾವ್ಯದ ಸಾಲುಗಳನ್ನು ಅವರು ಬಾಗಿಲಿನ ಚಿಲಕದ ಸಂದಿಗಳಲ್ಲಿ ಅಡಗಿಸಿಟ್ಟಿರುತ್ತಿದ್ದ ಮೊಳೆಗಳ ಸಹಾಯದಿಂದ ಅಥವಾ ಗಿಡಮರಗಳ ಚೂಪಾದ ಎಲೆಗಳ ಸಹಾಯದಿಂದ ಸೆಲ್ನ ಗೋಡೆಗಳ ಮೇಲೆ ಕೆತ್ತುತ್ತಿದ್ದರು.- ಮುಂದಿನ ಸಂಚಿಕೆ ಭಾಗ 3 ರಲ್ಲಿ)

Leave a Reply