ಹತಾಶರಾಗಿರುವ ಖಾಸಗಿ ಪೆಟ್ರೋಲ್ ಬಂಕ್ ಮಾಲೀಕರು

ಮಂಗಳೂರು: ನಯಾರ ಎನರ್ಜಿ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡು ಇಂಧನ ಪೂರೈಕೆ ಇಲ್ಲದೆ ಹತಾಶರಾಗಿರುವ ಖಾಸಗಿ ಪೆಟ್ರೋಲ್ ಬಂಕ್ ಮಾಲೀಕರು ಈಗ ರಾಜ್ಯ ಇಂಧನ ಸಚಿವ ಸುನಿಲ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಮಾಲೀಕರು ಸಚಿವರನ್ನು ಭೇಟಿಯಾಗಿದ್ದು, ಸರ್ಕಾರ ಮತ್ತು ಕಂಪನಿಯ ಜೊತೆ ಅಗತ್ಯ ಸಂವಹನ ನಡೆಸಿ ನಯಾರ ಕಂಪನಿಯ ತೈಲ ಡಿಪೋಗಳಿಂದ ಇಂಧನ ಸರಬರಾಜು ಮಾಡುವಂತೆ ಸೂಚಿಸಿ ನಮಗೆ ನ್ಯಾಯ ದೊಕಿಸಿಕೊಡಬೇಕು ಎಂದು ಸಚಿವರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಮಂಗಳೂರು ಮತ್ತು ಉಡುಪಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಪೆಟ್ರೋಲ್ ಪಂಪ್ ನಡೆಸುತ್ತಿದ್ದು, ತಲಾ ಕನಿಷ್ಠ ಎರಡು ಕೋಟಿಯಷ್ಟು ಬಂಡವಾಳ ಹೂಡಿ ಸ್ಥಾಪಿಸಿ ಹಲವಾರು ವರ್ಷಗಳಿಂದ ವ್ಯಾಪಾರ ನಡೆಸಿಕೊಂಡು ಬಂದಿರುತ್ತೇವೆ. ಕಳೆದ ಹತ್ತು ದಿಗಳಿಂದ ಕಂಪನಿಯು ಯಾವುದೇ ಮುನ್ಸೂಚನೆ ನೀಡದೆ ಜಿಲ್ಲಾದ್ಯಂತ ಇರುವ ಎಲ್ಲಾ ಖಾಸಗಿ ಪೆಟ್ರೋಲ್ ಪಂಪ್‌ಗಳಿಗೆ ತೈಲ ಸರಬರಾಜನ್ನು ಅನಿರ್ದಿಷ್ಟ ಅವಧಿಯ ವರೆಗೆ ನಿಲ್ಲಿಸಿದ್ದಾರೆ. ಇದರ ಪರಿಣಾಮವಾಗಿ ಉದ್ದಿಮೆಗೆ ಪಡೆದ ಸಾಲ ಮತ್ತು ಬಡ್ಡಿ, ಟ್ಯಾಂಕರ್ ಸಾಲ ಮತ್ತು ಬಡ್ಡಿ, ಹಾಗೂ ಕನಿಷ್ಠ ಹತ್ತು ಜನ ಕಾರ್ಮಿಕರ ಸಂಬಳ ಭರಿಸಲು ಕಷ್ಟಕರವಾಗಿದೆ. ಅಲ್ಲದೆ ಕಂಪನಿಯವರು ಮಾರುಕಟ್ಟೆ ಬೆಲೆಗಿಂತ 2 ರೂ. ಹೆಚ್ಚು ವಿಧಿಸುತ್ತಿದ್ದು ವ್ಯಾಪಾರವನ್ನು ಶಾಶ್ವತವಾಗಿ ಮುಚ್ಚಿಸುವ ಹುನ್ನಾರವಾಗಿದೆ ಎಂದೂ ಮನವಿಯಲ್ಲಿ ವಿವರಿಸಲಾಗಿದೆ.

Leave a Reply