ಸಾವರ್ಕರ್ ಅವರ ಹಿಂದೂತ್ವ!

ಭಾರತಾಂಬೆಯ ಕಣ್ಣಪುಷ್ಪದಲ್ಲಿರುವ ತಾವರೆಬಿಂದುಗಳ ಎರಡು ಹೆಸರುಗಳೇ ಸ್ವಾಮಿ ವಿವೇಕಾನಂದರು ಮತ್ತು ವಿನಾಯಕ ದಾಮೋದರ ಸಾವರ್ಕರ್. ನರೇಂದ್ರರನ್ನು ಹಾಗೂ ಸಾವರ್ಕರ್ ಅವರನ್ನು ಪಕ್ಕಕ್ಕೆ ಇಟ್ಟು ಭರತಖಂಡದ ಯಶೋಗಾಥೆಯನ್ನು ಬರೆಯುವುದು ಬಿಡಿ, ಕಲ್ಪಿಸಿಕೊಳ್ಳಲು ಕೂಡ ಸಾಧ್ಯವಿಲ್ಲ. ಸಾಗರದಂತಿರುವ ಈ ಎರಡು ವ್ಯಕ್ತಿತ್ವಗಳ ಆಳ ಅಗಲಗಳನ್ನು ಪುಟ್ಟ ಬೊಗಸೆಯಲ್ಲಿ ಹಿಡಿದಿಡುವ ಅಳಿಲಸೇವೆಯನ್ನು ಮಾತ್ರ ಇಲ್ಲಿ ಮಾಡುವ ಪ್ರಯತ್ನ ನನ್ನದು. ಹಿಂದೂತ್ವವಾದಿಗಳಿಗೆ ಭಗವತ್ಗೀತೆಯೇ ಆಗಿರುವ “ಹಿಂದೂತ್ವ” ಹೊತ್ತಗೆಯನ್ನು ಸಾವರ್ಕರ್ ಅವರು 1921 ರಲ್ಲಿ ರತ್ನಗಿರಿ ಜೈಲಿನಲ್ಲಿ ಕುಳಿತು ಬರೆಯುವಾಗ ಮುಂದೊಂದು ದಿನ ಇದು ಹಿಂದೂತ್ವವಾದಿಗಳ ಪಾಲಿಗೆ ಜ್ಞಾನಕೋಶವೇ ಆಗಬಹುದು ಎನ್ನುವ ಸಂಕಲ್ಪ ದೇವರಲ್ಲಿಯೇ ಇದ್ದಿರಬಹುದು.

 

ಆ ಪುಸ್ತಕ ಬಿಡುಗಡೆಗೊಂಡ ಬಳಿಕವೇ ರಾಜಕೀಯ ಚರ್ಚೆಗಳಲ್ಲಿ ಹಿಂದೂತ್ವ ಎನ್ನುವ ಪದವು ಕೇಳಿಸತೊಡಗಿತು. ಆದರೆ ಆವತ್ತಿನಿಂದ ಇವತ್ತಿನ ತನಕ ಈ ಹಿಂದೂತ್ವ ಎನ್ನುವ ಪದ ಬೇರೆ ಬೇರೆ ಮನಸ್ಥಿತಿಯ ಜನರಿಗೆ ಬೇರೆ ಬೇರೆ ರೀತಿಯಲ್ಲಿ ಭಾವ ನೀಡುತ್ತಿದೆ. ಹಿಂದೂರಾಷ್ಟ್ರದ ಪರಿಕಲ್ಪನೆಯಲ್ಲಿ ನಂಬಿಕೆ ಇಟ್ಟಿರುವವರಿಗೆ, ಈ ಶಬ್ದವು ಹಿಂದೆಯೂ ಮತ್ತು ಈಗಲೂ ಭಾರತ ಎಂದರೆ ಯಾವ ದೇಶವಾಗಿತ್ತು ಮತ್ತು ಭವಿಷ್ಯದಲ್ಲಿ ಯಾವ ದೇಶ ಆಗಬೇಕು ಎನ್ನುವ ಸಂಕಲ್ಪದಂತೆ ಕಾಣಿಸುತ್ತಿದೆ. ಈ ನಂಬಿಕೆಗಳನ್ನು ಹೊಂದಿರುವವರ ಪ್ರಕಾರ ಭಾರತ ದೇಶವೆಂದರೆ ಅದು ಹಿಂದೂ ಇತಿಹಾಸದೊಂದಿಗೆ, ಹಿಂದೂ ಮೌಲ್ಯಗಳೊಂದಿಗೆ ಹಾಸುಹೊಕ್ಕಾಗಿ ಸಮ್ಮಿಳಿತಗೊಂಡಿದೆ. ಆದರೆ ಭಾರತವು ವಿವಿಧ ಮತ, ಧರ್ಮ, ಸಂಸ್ಕೃತಿ, ಆಚಾರ, ವಿಚಾರ, ಸಂಪ್ರದಾಯವನ್ನು ಒಳಗೊಂಡಿರುವ ದೇಶ ಎನ್ನುವವರು ಹಿಂದೂತ್ವದ ಈ ವ್ಯಾಖ್ಯಾನವನ್ನು ಒಪ್ಪುವುದಿಲ್ಲ. ಇಂತವರ ಪ್ರಕಾರ ಹಿಂದೂತ್ವದ ಪರಿಕಲ್ಪನೆಯು ಹಿಂದೂಯೇತರರನ್ನು ಹೊರಹಾಕುವಂತಾಗಿದ್ದು, ವಿಶೇಷವಾಗಿ ಮುಸ್ಲಿಮರನ್ನು ಗುರಿ ಇಟ್ಟು ಮಾಡಿದ್ದು ಎನ್ನುವಂತಾಗಿದೆ.

 

ಆದರೆ ಈ ಹಿಂದೂ ಪುನರುತ್ಥಾನದ ಅನಿವಾರ್ಯತೆಯನ್ನು ಪ್ರತಿಪಾದಿಸಿದವರಲ್ಲಿ ಸಾವರ್ಕರ್ ಮೊದಲಿಗರಲ್ಲ. ಇವರಿಗಿಂತ ಮೊದಲು ಸ್ವಾಮಿ ವಿವೇಕಾನಂದರು ಹಿಂದೂ ಪುನರುತ್ಥಾನದ ಅಗತ್ಯದ ಬಗ್ಗೆ ಬಹಿರಂಗವಾಗಿ ಕರೆ ನೀಡಿದ್ದರು. ಆದರೆ ಸ್ವಾಮಿ ವಿವೇಕಾನಂದರ ಮತ್ತು ಸಾವರ್ಕರ್ ಅವರ ಹಿಂದೂತ್ವದ ಕಲ್ಪನೆಯಲ್ಲಿ ಒಂದು ಮುಖ್ಯವಾದ ವ್ಯತ್ಯಾಸವಿದೆ. ವಿವೇಕಾನಂದರು ಹಿಂದೂತ್ವದ ಪರಿಕಲ್ಪನೆಯನ್ನು ಧಾರ್ಮಿಕ ನುಡಿಗಟ್ಟಿನಲ್ಲಿ ಜನರ ಮುಂದಿಟ್ಟರು. ಸಾವರ್ಕರ್ ಅವರು ತಮ್ಮ ಹಿಂದೂತ್ವದ ಪರಿಕಲ್ಪನೆಯನ್ನು ರಾಜಕೀಯ ನುಡಿಗಟ್ಟಿನಲ್ಲಿ ಪ್ರತಿಪಾದಿಸಿದರು. ಹಾಗೆಯೇ ತಮ್ಮ ಭಾರತದ ಪರಿಕಲ್ಪನೆಯನ್ನು ಇವರು ಜನಸಮುದಾಯದ ಹಿಂದೂತನದ ಒಗ್ಗಟ್ಟಿನ ತಳಹದಿಯ ಮೇಲೆ ಬೆಳೆಸಲು ಪಣತೊಟ್ಟರು. ಅದರೊಂದಿಗೆ ಹಿಂದೂ ನಾಗರಿಕತೆ ಮತ್ತು ಹಿಂದೂ ಜನಜೀವನದ ಸತ್ವವನ್ನು ಮತ್ತೆ ಉಳಿಸಿಕೊಳ್ಳಲು ಅನಿವಾರ್ಯವಾದರೆ ಹೋರಾಟಕ್ಕೂ ಇಳಿಯಬೇಕಾದ ಕೆಚ್ಚನ್ನು ಬಿತ್ತಬೇಕಾಗುತ್ತದೆ ಎಂದು ಸಾವರ್ಕರ್ ಕರೆ ನೀಡಿದರು. ಸಾವರ್ಕರ್ ಅವರ ಪ್ರಕಾರ ಹಿಂದೂತ್ವ ಮತ್ತು ಹಿಂದೂಯಿಸಂ ಎರಡೂ ಒಂದೇ ಅಲ್ಲ.

 

ಈ ವಿಚಾರವಾಗಿ ಹೆಚ್ಚಿನ ಸ್ಪಷ್ಟತೆ ಇರಬೇಕೆಂದು ಬಯಸಿದ ಅವರು ಹಿಂದೂ ಎಂದರೆ ಯಾರು ಎನ್ನುವುದಕ್ಕೆ ತಮ್ಮದೇ ವ್ಯಾಖ್ಯಾನವನ್ನು ನೀಡಿದ್ದಾರೆ. ಈ ಸಂಬಂಧವಾಗಿ ಬರೆದಿರುವ ಅವರು ಹಿಂದೂ ಎನ್ನುವ ಪದವು ವೇದಗಳಷ್ಟು ಪ್ರಾಚೀನವಾಗಿದೆ. ಅವರು ಪ್ರತಿಪಾದಿಸಿದ ಪ್ರಕಾರ ಪ್ರಪಂಚದ ಅತ್ಯಂತ ಪ್ರಾಚೀನ ಭಾಷೆಯಾದ ಪಷರ್ಿಯಾದ ಅವೆಸ್ತಾ ಭಾಷೆಯಲ್ಲಿ ಹಪ್ತ ಹಿಂದೂ ಎನ್ನುವ ಶಬ್ದ ಇದ್ದು, ಸಂಸ್ಕೃತದ ‘ಸ’ ಅಲ್ಲಿ ‘ಹ’ ಎಂದಾಗಿದೆ. ಆದ್ದರಿಂದ ಇಲ್ಲಿ ಏಳು ನದಿ ಅಥವಾ ಏಳು ಸಮುದ್ರಗಳಿಂದ ಆವೃತವಾಗಿರುವ ಭೂಪ್ರದೇಶದಲ್ಲಿ ವಾಸವಾಗಿರುವ ಸಪ್ತಸಿಂಧೂ ಜನರನ್ನು ಆವೆಸ್ತಾ ಭಾಷೆಯಲ್ಲಿ ಹಪ್ತ ಹಿಂದೂ ಎಂದು ಎಂದು ಉಲ್ಲೇಖಿಸಿರುವುದನ್ನು ತಮ್ಮ ಪುಸ್ತಕ ಹಿಂದೂತ್ವದಲ್ಲಿ ನಮೂದಿಸಿದ್ದಾರೆ. ಈ ಮೂಲಕ ಪ್ರಪಂಚದ ಆರಂಭದಲ್ಲಿಯೇ ಹಿಂದೂ ಶಬ್ದದ ಜನನವನ್ನು ಅವರು ಹೆಮ್ಮೆಯಿಂದ ತಿಳಿಸಿದ್ದಾರೆ. ಇದನ್ನು ಅರಿಯುವಾಗ ನಮಗೆ ನಿಜಕ್ಕೂ ರೋಮಾಂಚನವಾಗಲೇಬೇಕು. (ಭಾಗ -1 )

(ಹಿಂದೂ ಧರ್ಮವನ್ನು ಬಿಟ್ಟು ಇಸ್ಲಾಂಗೆ ಮತಾಂತರಗೊಂಡಿರುವ ಮೊದಲ ತಲೆಮಾರಿನ ವ್ಯಕ್ತಿಗಳಾದ ಬೋಹ್ರಾ ಮತ್ತು ಖೋಜಾ ಮುಸ್ಲಿಂ ಸಮುದಾಯಗಳು ವಿಷ್ಣುವಿನ ದಶಾವತಾರವನ್ನು ತಮ್ಮ ಹೀರೋಗಳೆಂದು ಪೂಜಿಸುತ್ತವೆ- ಸಾವರ್ಕರ್)

Nagendra Shenoy M

Writer

Leave a Reply