ಉರ್ದು ಭಾಷೆಯ ಬಗ್ಗೆ ಸಾವರ್ಕರ್ ಅವರಿಗೆ ಯಾವ ಭಾವನೆ ಇತ್ತು?

(ಹಿಂದಿನ ಸಂಚಿಕೆಯಲ್ಲಿ- ದಯಾನಂದ ಸರಸ್ವತಿಗಳ ಆರ್ಯ ಸಮಾಜದಿಂದ ಸ್ಫೂರ್ತಿ ಪಡೆದು “ಶುದ್ಧಿ” ಆಂದೋಲನವನ್ನು ಸಾವರ್ಕರ್ ಎರವಲು ತೆಗೆದುಕೊಂಡಿದ್ದರು. ಅದರಂತೆ ಅವರು, ಕ್ರೈಸ್ತ ಮತಕ್ಕೆ ಮತಾಂತರಗೊಂಡಿದ್ದ ಒಂದು ಮಹಾರ್ ಹಾಗೂ ಎಂಟು ಮಂದಿಯನ್ನೊಳಗೊಂಡ ಬ್ರಾಹ್ಮಣ ಕುಟುಂಬವೊಂದನ್ನು ತಮ್ಮ ನೇತೃತ್ವದಲ್ಲಿ 1926 ರಲ್ಲಿ ಹಿಂದೂ ಧರ್ಮಕ್ಕೆ ಮರುಮತಾಂತರಗೊಳಿಸಿದರು)

ಸಾವರ್ಕರ್ ಕೇವಲ ಹಿಂದೂ ಧರ್ಮವನ್ನುಬಿಟ್ಟು ಹೋದವರನ್ನು ಮರಳಿ ಮೂಲಧರ್ಮಕ್ಕೆ ಕರೆತರುವ ಉದ್ದೇಶದ ಶುದ್ಧಿ ಕಾರ್ಯವನ್ನಷ್ಟೇ ಕೈಗೆತ್ತಿಕೊಳ್ಳಲಿಲ್ಲ. ಅವರು ಬಹಳ ಹುಮ್ಮಸ್ಸಿನಿಂದ ಕೈಗೆತ್ತಿಕೊಂಡ ಇನ್ನೊಂದು ಕೆಲಸವೆಂದರೆ ಮರಾಠಿ ಭಾಷೆಯ ಶುದ್ಧಿಕರಣ. ಮರಾಠಿ ಭಾಷೆಯಲ್ಲಿ ಸೇರಿಕೊಂಡಿರುವ ಉರ್ದು ಪದಗಳನ್ನೆಲ್ಲ ಕೈಬಿಟ್ಟು, ಸಂಸ್ಕೃತದಿಂದ ಬಂದ ಮೂಲ ಮರಾಠಿ ಶಬ್ದಗಳನ್ನೇ ಮರಾಠಿ ಭಾಷಿಕರು ಬಳಸಬೇಕು ಎಂದು ಪ್ರತಿಪಾದಿಸಿದರು. ಸಾವರ್ಕರ್ ಅವರು ತಮ್ಮ “ಭಾಷಾಶುದ್ಧಿ” ಕೃತಿಯಲ್ಲಿ ಮರಾಠಿ ಭಾಷೆಗೆ ಉರ್ದು ಪದಗಳು ಸೇರಿಕೊಳ್ಳುವುದನ್ನು ತಡೆಯದಿದ್ದರೆ ನಮ್ಮ ಭಾಷೆಯೇ ನಾಶವಾಗಿ ಹೋಗುತ್ತದೆ ಎಂದು ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪೂರಕವಾಗಿ ಅವರು, ಅರೇಬಿಕ್ ಮತ್ತು ಪರ್ಶಿಯನ್ ಭಾಷೆಯ ಪದಗಳ ಸೇರ್ಪಡೆಯನ್ನು ತಡೆಯದೇ ಹೋಗಿದ್ದರಿಂದ ಈಗಾಗಲೇ ಸಿಂಧ್, ಪಂಜಾಬ್, ಆಗ್ರಾ ಹಾಗೂ ಉತ್ತರ ಭಾರತದ ಇತರ ಭಾಗಗಳಲ್ಲಿ ಆಯಾ ಪ್ರಾಂತ್ಯದ ಭಾಷೆಗಳೇ ನಲುಗಿ ಹೋಗಿವೆ. ಈ ಅನಾಹುತಕ್ಕೆ ಉರ್ದು ಕೂಡ ಸಾಕಷ್ಟು ಕಾಣಿಕೆ ನೀಡಿದೆ. ಈಗ ನಡೆಯುತ್ತಿರುವ ವಿದ್ಯಮಾನಗಳನ್ನು ಹೀಗೆಯೇ ಬಿಟ್ಟರೆ ಭವಿಷ್ಯದಲ್ಲಿ ಮರಾಠಿಗೆ ಕೂಡ ಇದೇ ದುರ್ಗತಿ ಬರಲಿದೆ. ಆದ್ದರಿಂದ ಮರಾಠಿ ಭಾಷಿಕರೆಲ್ಲರೂ ಈ ಬಗ್ಗೆ ಎಚ್ಚರ ವಹಿಸಬೇಕು ಎಂದು ಪುಸ್ತಕದಲ್ಲಿ ಬರೆದಿದ್ದಾರೆ. ಸೆಲ್ಯೂಲರ್ ಜೈಲಿನಲ್ಲಿ ಸಾವರ್ಕರ್ ಅವರು ತಮ್ಮ ಸೆಲ್ನಲ್ಲಿಯೇ ಅಸಂಖ್ಯಾತ ಕವನಗಳನ್ನು ರಚಿಸಿದರು. ತಮ್ಮಲ್ಲಿ ಉಕ್ಕಿ ಬರುತ್ತಿದ್ದ ಕಾವ್ಯದ ಸಾಲುಗಳನ್ನು ಅವರು ಬಾಗಿಲಿನ ಚಿಲಕದ ಸಂದಿಗಳಲ್ಲಿ ಅಡಗಿಸಿಟ್ಟಿರುತ್ತಿದ್ದ ಮೊಳೆಗಳ ಸಹಾಯದಿಂದ ಅಥವಾ ಗಿಡಮರಗಳ ಚೂಪಾದ ಎಲೆಗಳ ಸಹಾಯದಿಂದ ಸೆಲ್ನ ಗೋಡೆಗಳ ಮೇಲೆ ಕೆತ್ತುತ್ತಿದ್ದರು. ಅದನ್ನೆಲ್ಲ ಅಳಿಸುವ ಮುನ್ನ ಅವರು ಆ ಸಾಲುಗಳನ್ನು ಹೃದ್ಗತ ಮಾಡಿಕೊಳ್ಳುತ್ತಿದ್ದರು. ಅವರು ಬರೆದ “ಬೇಡಿ” ಮತ್ತು “ಕೊಠಡಿ” ಎನ್ನುವ ಕವನಗಳು, ರವೀಂದ್ರನಾಥ ಟ್ಯಾಗೋರರಿಗೆ 1931 ರಲ್ಲಿ ನೊಬೆಲ್ ಪುರಸ್ಕಾರ ಬಂದಾಗ ಬರೆದ ಒಂದು ಸ್ತುತಿಗೀತೆ, ತಮ್ಮ ಮನದೊಳಗೆ ಕಲ್ಪನೆಯಾಗಿ ಮೂಡಿಬಂದ ಒಂದು ಉದ್ಯಾನ ಮತ್ತು ಅಲ್ಲಿನ ಅಚ್ಚಹಸಿರನ್ನು ವರ್ಣಿಸಿರುವ “ಕಮಲಾ” ಎನ್ನುವ ಪದ್ಯಗಳೆಲ್ಲಾ ಇವೆ. ಒಟ್ಟಿನಲ್ಲಿ ಒಬ್ಬ ಪ್ರಖರ ಸ್ವಾತಂತ್ರ್ಯ ಹೋರಾಟಗಾರರಾಗಿ, ಭಾರತಾಂಬೆಯ ಸನಾತನ ಧರ್ಮದ ಪುನರುತ್ಥಾನದ ಹರಿಕಾರರಾಗಿ, ದೇಶಕ್ಕೆ ಕ್ರಾಂತಿಕಾರಿ ಹೆಜ್ಜೆಗಳಿಂದ ಸ್ವಾತಂತ್ರ್ಯ ದೊರಕಿಸಿಕೊಡಲು ಯಾವುದೇ ರಣತಂತ್ರ ಹೆಣೆಯಲು ಹಿಂದಡಿ ಇಡದ ಚಿಂತಕರಾಗಿ, ಅತ್ಯಂತ ಕ್ರೂರಶಿಕ್ಷೆಯಾದ ಕಾಲಾಪಾನಿ ವಾಸವನ್ನು ದಶಕಗಳ ತನಕ ಅನುಭವಿಸಿಯೂ ಸ್ಥಿತಪ್ರಜ್ಞತೆಯನ್ನು ಉಳಿಸಿಕೊಂಡವರಾಗಿ, ಗಾಣದ ಎಣ್ಣೆಯ ಶಿಕ್ಷೆಯನ್ನು ಅನುಭವಿಸಿದಾಗ ಬದುಕುವುದೇ ಸವಾಲಾಗಿದ್ದರೂ ಹೊರಗೆ ಬಂದು ಭಾರತಾಂಬೆಯ ಸೇವೆ ಮಾಡಲು ಚಿಂತಿಸಿದ ಕರ್ಮಯೋಗಿಯಾಗಿ, ತಮ್ಮ ಹರಿತ ಬರವಣಿಗೆಯಿಂದ ಸಾವಿರಾರು ಯುವಶಕ್ತಿಗಳಲ್ಲಿ ಉತ್ಸಾಹ ತುಂಬಿದ ಲೇಖಕರಾಗಿ, ಕವನ, ನಾಟಕ, ಪ್ರಬಂಧಗಳಿಂದಲೂ ದೇಶಪ್ರೇಮದ ಝರಿಯನ್ನು ಹರಿಸಿದ ಸಾಹಿತಿಯಾಗಿ, ಭಾಷಾಶುದ್ಧಿಯಿಂದ ಹಿಡಿದು ಹಿಂದೂ ಧರ್ಮದ ಬಲಿಷ್ಟಗೊಳ್ಳಲು ಹಗಲಿರುಳು ಶ್ರಮಿಸಿದ ಕಾಯಕಜೀವಿಯಾಗಿ ಮತ್ತು ಇದೆಲ್ಲದರ ಜೊತೆ ನಮ್ಮ ಊಹೆಗೂ ನಿಲುಕದ ವಿಚಾರ ತೀವ್ರತೆ ಮತ್ತು ಭಾವ ತೀವ್ರತೆಗಳ ಸಂಗಮವಾಗಿದ್ದರು ವೀರ ದಾಮೋದರ ಸಾವರ್ಕರ್.
ಒಬ್ಬರು ವೀರ ಸಾವರ್ಕರ್, ಇನ್ನೊಬ್ಬರು ವೀರ ಸನ್ಯಾಸಿ. ಕೇವಲ 39 ನೇ ವಯಸ್ಸಿನಲ್ಲಿ ತಾಯಿ ಭಾರತಾಂಬೆಯ ಸೇವೆಯನ್ನು ಇಹಲೋಕದಲ್ಲಿ ಮುಗಿಸಿ ಆಕೆಯ ಪಾದಕಮಲದಲ್ಲಿ ಚಿರನಿದ್ರೆಗೆ ಜಾರಿದ ಸ್ವಾಮಿ ವಿವೇಕಾನಂದರು ಭಾಷಣ ಮಾಡುವಾಗ ಒಂದು ಸಲ ಹೀಗೆ ಹೇಳಿದ್ದಾರೆ- “ನಾನು ಮಾಡಿರುವ ಅಲ್ಪ ಕಾರ್ಯವು ಕೇವಲ ನನ್ನಲ್ಲಿರುವ ಶಕ್ತಿಯಿಂದಲ್ಲ. ನನ್ನ ಮಾತೃಭೂಮಿಯಿಂದ ಹೊರಟ ಉತ್ತೇಜನ ಶುಭಾಶಯ ಆರ್ಶೀವಾದಗಳಿಂದ ಅದು ಸಾಧ್ಯವಾಯಿತು”

(ಸ್ವಾಮಿ ವಿವೇಕಾನಂದರು 1893 ಸೆಪ್ಟೆಂಬರ್ 11 ರಂದು ಶಿಕಾಗೋ ಸಮ್ಮೇಳನದಲ್ಲಿ ಹಿಂದೂ ಧರ್ಮ ಎಂದರೆ ಏನು ಎನ್ನುವುದನ್ನು ಒಂದು ವಾಕ್ಯದಲ್ಲಿಯೇ ಹೇಳಿದ್ದಾರೆ-” ಧಾರ್ಮಿಕ ಸಹನೆಯನ್ನು ಎಲ್ಲ ಧರ್ಮಗಳು ಸ್ವೀಕಾರಯೋಗ್ಯ ಎಂಬುದನ್ನು ಜಗತ್ತಿಗೆ ಬೋಧಿಸಿದ ಧರ್ಮಕ್ಕೆ ಸೇರಿದವನು ನಾನು ಎಂಬ ಹೆಮ್ಮೆ ನನ್ನದು. ಪರಧರ್ಮ ಸಹಿಷ್ಣುತೆಯಲ್ಲಿ ನಮಗೆ ನಂಬಿಕೆ ಇದೆ. ಅಷ್ಟೇ ಅಲ್ಲ, ಎಲ್ಲ ಧರ್ಮಗಳೂ ಸತ್ಯ ಎಂಬುದನ್ನು ನಾವು ಒಪ್ಪುತ್ತೇವೆ. ಜಗತ್ತಿನ ಎಲ್ಲ ರಾಷ್ಟ್ರಗಳಲ್ಲಿ, ಎಲ್ಲ ಧರ್ಮಗಳಲ್ಲಿ, ಯಾರು ಹಿಂಸೆಗೆ ಒಳಗಾದರೊ ಅವರಿಗೆಲ್ಲ ಆಶ್ರಯ ನೀಡಿದ ದೇಶಕ್ಕೆ ಸೇರಿದವನು ಎಂಬ ಹೆಮ್ಮೆ ನನ್ನದು” ಎಂದು ಹೇಳಿದ್ದಾರೆ. ಮುಂದಿನ ಸಂಚಿಕೆಯಲ್ಲಿ)

Leave a Reply