ಈ ಸಿ ಆರ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಸ್ಟಡಿ ಕಾಲೇಜಿನಲ್ಲಿ ರಾಗಿಂಗ್

ಕುಂದಾಪುರ ಠಾಣಾ ವ್ಯಾಪ್ತಿಯ ಆಚ್ಲಾಡಿ ಎಂಬಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಮ್ಯಾನೇಜ್ಮೆಂಟ್ ಕಾಲೇಜೊಂದರಲ್ಲಿ ಜ್ಯುನಿಯರ್ ಸಹಪಾಠಿಯ ಮೇಲೆ ವಿದ್ಯಾರ್ಥಿಗಳಿಬ್ಬರು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಡೆದಿದೆ. ನಿನ್ನೆ ತಡರಾತ್ರಿ ಕಾಲೇಜಿನ ಹಾಸ್ಟೆಲಿನಲ್ಲಿ ಉಳಿದುಕೊಂಡಿದ್ದ ದೇವದಾಸ್ ಎಂಬ ಯುವಕನಿಗೆ ದಿಲ್ಶಾದ್ ಮತ್ತು ಶಿಂಟೋ ಎಂಬವರು ಕೈ ಮತ್ತು ಬಾಟಲಿಯಿಂದ ಗಂಭೀರ ಹಲ್ಲೆ ನಡೆಸಿದ್ದಾರೆ. ಈ ವೇಳೆ ತೀವ್ರ ರಕ್ತಸ್ರಾವವಾಗಿ ಕುಸಿದುಬಿದ್ದ ದೇವದಾಸ್ ನನ್ನು ಆತನ ಸ್ನೇಹಿತರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಲ್ಲೆಗೈದವರ ದೇವದಾಸನಿಗೆ ನಾನಾ ರೀತಿಯ ಹಿಂಸೆಯನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ. ಕಾಲೇಜಿನಲ್ಲಿ ಹಿಂದೆಯೂ ಈ ರೀತಿಯ ಘಟನೆಗಳು ನಡೆದಿದ್ದ ಉದಾಹರಣೆಗಳಿದ್ದು ಕೇರಳ ಮೂಲದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ವ್ಯಾಸಂಗ ನಡೆಸುತ್ತಿದ್ದಾರೆ. ಕಾಲೇಜು ಆಡಳಿತ ಮಂಡಳಿ ಈ ಘಟನೆಯ ಬಗ್ಗೆ ಗಂಭೀರವಾಗಿ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಹಿಂದೂ ಜಾಗರಣ ವೇದಿಕೆಯ ಮುಖಂಡರು ಬೆಳಿಗ್ಗೆ ಕಾಲೇಜಿಗೆ ಭೇಟಿ ನೀಡಿ ದುಷ್ಕರ್ಮಿಗಳ ಮೇಲೆ ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ

ಹಿಂದು ಜಾಗರಣ ವೇದಿಕೆಯ ಮುಖಂಡರು ಸ್ಥಳಕ್ಕೆ ಆಗಮಿಸಿದ ವಿಷಯ ತಿಳಿಯುತ್ತಿದ್ದಂತೆ ಕುಂದಾಪುರ ಪೊಲೀಸರು ಕಾಲೇಜಿಗೆ ಬಂದು ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ತಲೆಗೆ ಗಂಭೀರ ಹೊಡೆತಗಳು ಬಿದ್ದ ಕಾರಣ ದೇವದಾಸ್ ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ವಾರದ ಹಿಂದೆ ಈ ಕಾಲೇಜಿನಲ್ಲಿ ಹಲ್ಲೆಗೈದ ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ಒಟ್ಟು ಐವರು ವಿದ್ಯಾರ್ಥಿಗಳನ್ನುಆಶಿಸ್ತಿನ ಕಾರಣಕ್ಕೆ ಸಸ್ಪೆಂಡ್ ಮಾಡಲಾಗಿತ್ತು. ಇದೇ ವಿಚಾರಕ್ಕೆ ಸಂಬಂಧಿಸಿ ದೇವದಾಸ್ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ. ಈ ರೀತಿಯ ರಾಗಿಂಗ್ ಪ್ರಕರಣಗಳು ಶಿಕ್ಷಣಕ್ಕಾಗಿ ಬರುವ ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ಸಂಘಟನೆ ಮುಖಂಡರು ಆಗ್ರಹಿಸಿದ್ದಾರೆ

Leave a Reply