ಕಸಾಪ ಕಾರ್ಯಚಟುವಟಿಕೆಗೆ ಹಿರಿಯ ಸದಸ್ಯರ ಕಿಡಿ

ಉಡುಪಿ, ಅ.23: ಕರ್ನಾಟಕದ ಪ್ರಾಚೀನ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಒಂದು ಲಕ್ಷಕ್ಕಿಂತ ಕಡಿಮೆ ಸದಸ್ಯರು ಇದ್ದಾರೆ. ಇದೊಂದು ವ್ಯವಸ್ಥಿತವಾದ ಷಡ್ಯಂತ್ರ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಹಿರಿಯ ಸದಸ್ಯ ಉಡುಪಿಯ ಧಾರ್ಮಿಕ ವಿದ್ವಾಂಸ ವಾಸುದೇವ ಭಟ್ ಪೆರಂಪಳ್ಳಿ ಕಿಡಿಕಾರಿದ್ದಾರೆ. ಇದರ ಹಿಂದಿನ ವ್ಯೂಹಾತ್ಮಕ ರಣತಂತ್ರ ಏನು? ಸದಸ್ಯತ್ವ ನೀಡದಿರುವ, ಕಡಿಮೆ ಸದಸ್ಯರನ್ನು ಮಾಡುವ ಹಿಂದಿನ ಹುನ್ನಾರ ಏನು ಎಂಬುದು ಸ್ಪಷ್ಟ ಆಗಬೇಕು ಎಂದು ಭಟ್ ಪ್ರಶ್ನಿಸಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಏಳು ಲಕ್ಷದಷ್ಟು ಜನಸಂಖ್ಯೆ ಇದೆ. ಸಾಹಿತ್ಯ ಪರಿಷತ್ತಿನ ಸದಸ್ಯರ ಸಂಖ್ಯೆ 2 ಸಾವಿರವೂ ಇಲ್ಲ. ಇಂತಹ ಉದಾಸೀನತೆಯ ಹಿಂದಿನ ಕಾರಣ ಏನು ಎಂಬುದು ಸ್ಪಷ್ಟ ಆಗಬೇಕು. 10ರೂಪಾಯಿ ಸದಸ್ಯತ್ವ ಮಾಡುವ ಅಭಿಯಾನವನ್ನು ಈ ಹಿಂದಿನ ಜಿಲ್ಲಾಧ್ಯಕ್ಷರುಗಳು, ರಾಜ್ಯ ಅಧ್ಯಕ್ಷರು ಮಾಡದೇ ಇರಲು ಕಾರಣವೇನು? ಎಂಬ ಪ್ರಶ್ನೆಗಳು ಎದ್ದಿವೆ.

ನವೆಂಬರ್ 21 ರಂದು ನಡೆಯುವ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರು ಮತ್ತು ರಾಜ್ಯ ಅಧ್ಯಕ್ಷರ ಚುನಾವಣೆ ಮೂಲಕ ಬದಲಾವಣೆಯನ್ನು ತರಬೇಕು. ಸಂಘಟನೆಯನ್ನು ಬಲಯುತವಾಗಿ ಮಾಡುವ ಜಿಲ್ಲಾಧ್ಯಕ್ಷರು ಮತ್ತು ರಾಜ್ಯ ಅಧ್ಯಕ್ಷರ ಆಯ್ಕೆ ಆಗಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಮೇಲೆ ನಿರೀಕ್ಷೆ ಇದೆ. ಮುಂದಿನ ಚುನಾವಣೆಯ ವೇಳೆಗೆ 1ಕೋಟಿ ಸದಸ್ಯತ್ವ ಆಗಬೇಕು. ಕನ್ನಡ ಕೆಲಸಗಳನ್ನು ಸದೃಢವಾಗಿ ಮಾಡಬೇಕಾದರೆ ಸಂಘಟನೆ ಗಟ್ಟಿಯಾಗಬೇಕು ಸದಸ್ಯರ ಸಂಖ್ಯೆ ಹೆಚ್ಚಾಗಬೇಕು. ಕನ್ನಡಪರ ಸಂಘಟನೆಗಳು ಬೀದಿ ಹೋರಾಟ ಮಾಡುವ ಬದಲು, ಬೊಬ್ಬೆ ಹಾಕುವ ಬದಲು ಸಾಹಿತ್ಯ ಪರಿಷತ್ತಿನ ಸದಸ್ಯರ ಸಂಖ್ಯೆಯನ್ನು ಹೆಚ್ಚು ಮಾಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಕೆಲವು ಮಂದಿ ಅಧಿಕಾರವನ್ನು ತಮ್ಮ ಕಪಿಮುಷ್ಟಿಯಲ್ಲಿಟ್ಟುಕೊಂಡು, ಸದಸ್ಯತ್ವದ ಸಂಖ್ಯೆಯನ್ನು ನಿಯಮಿತವಾಗಿ ಇಟ್ಟುಕೊಂಡಿದ್ದಾರಾ ಎಂಬ ಪ್ರಶ್ನೆಗಳು ಎದ್ದಿವೆ.

Leave a Reply