ಉಡುಪಿ: ನದಿಗೆ ಈಜಲು ತೆರಳಿದ ಯುವಕರು ನೀರುಪಾಲು

ಉಡುಪಿ, ಅ.೨೦: ಹೊಳೆಯಲ್ಲಿ ಈಜಾಡುತ್ತಿದ್ದ ಸಂದರ್ಭ ನೀರಿನಲ್ಲಿ ಮುಳುಗಿ ಇಬ್ಬರು ಮೃತಪಟ್ಟಿರುವ ಘಟನೆ ಉಡುಪಿ ತಾಲೂಕಿನ ಉಗ್ಗೇಲ್ ಬೆಟ್ಟು ಮಡಿಸಾಲು ಎಂಬಲ್ಲಿ ನಡೆದಿದೆ.
ಮೃತರನ್ನು ಚಾಂತಾರು ನಿವಾಸಿ ಉದಯ್ ಕುಮಾರ್ ಎಂಬವರ ಪುತ್ರ ಶ್ರೇಯಸ್ (೧೮) ಹಾಗೂ ವಾರಂಬಳ್ಳಿಯ ಸ್ವರ್ಣನಗರ ಸನ್‌ಶೈನ್ ಬಿಲ್ಡಿಂಗ್ ನಿವಾಸಿ ಅನಾಸ್ (೧೬) ಎಂದು ಗುರುತಿಸಲಾಗಿದೆ.

ರಾತ್ರಿ ೯ ಗಂಟೆಯ ಸುಮಾರಿಗೆ ಶ್ರೇಯಸ್‌ನ ತಂದೆ ಕೆಲಸ ಮುಗಿಸಿ ಮನೆಗೆ ಬಂದಾಗ ಅವರ ಪತ್ನಿ ಮಗ ಶ್ರೇಯಸ್ ಆಟ ಆಡಲು ಹೋಗುವುದಾಗಿ ಹೇಳಿ ಈವರೆಗೆ ಮನೆಗೆ ಬಂದಿಲ್ಲ ಎಂದು ತಿಳಿಸಿದ್ದಾರೆ. ಈ ಬಗ್ಗೆ ಶ್ರೇಯಸ್‌ನ ಸ್ನೇಹಿತ ಸಂಜಯ್‌ರಾಜ್ ಅವರಲ್ಲಿ ವಿಚಾರಿಸಿದ ಸಂದರ್ಭ ಶ್ರೇಯಸ್‌ನ ಬಗ್ಗೆ ತನಗೆ ಏನೂ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಈ ಬಗ್ಗೆ ಆಸುಪಾಸಿನ ಎಲ್ಲಾ ಕಡೆ ವಿಚಾರಿಸಿ ಹುಡುಕಲಾಗಿ ಯಾವುದೇ ಮಾಹಿತಿ ತಿಳಿಯಲಿಲ್ಲ. ಎಲ್ಲಾ ಕಡೆ ವಿಚಾರಿಸುತ್ತಿರುವಾಗ ಉಪ್ಪೂರು ಗ್ರಾಮದ ಉಗ್ಗೇಲ್‌ಬೆಟ್ಟು ರೈಲ್ವೇ ಬ್ರಿಜ್‌ನ ಕೆಳಗೆ ಮಡಿಸಾಲು ಹೊಳೆಯಲ್ಲಿರುವ ರೈಲ್ವೇ ಬ್ರಿಜ್‌ನ ಪಿಲ್ಲರ್ ಪುಟ್ಟಿಂಗ್ ಮೇಲೆ ಒಂದು ಬ್ಯಾಗ್, ೨ ಜೊತೆ ಚಪ್ಪಲಿ, ಮಿರಿಂಡಾ ಬಾಟಲ್, ರಿಂಗ್ ಆಗುತ್ತಿರುವ ಮೊಬೈಲ್ ಇರುವ ಬಗ್ಗೆ ಸ್ಥಳೀಯರೊಬ್ಬರು ಮಾಹಿತಿ ನೀಡಿದ್ದಾರೆ.

ಅ.೧೯ರಂದು ತಮ್ಮ ಸ್ನೇಹಿತ ಸಂಜಯ್ ಜೊತೆ ಮಧ್ಯಾಹ್ನ ವೇಳಗೆ ನದಿಗೆ ಈಜಲು ಹೋಗಿದ್ದರು. ಸಂಜಯ್ ದಡದಲ್ಲಿ ಈಜುತ್ತಿದ್ದರೆ, ಶ್ರೇಯಸ್ ಹಾಗೂ ಅನಾಸ್ ನದಿಯ ಮಧ್ಯೆ ಹೋಗಿದ್ದರು ಎನ್ನಲಾಗಿದೆ. ಈ ಸಂದರ್ಭ ಅವರಿಬ್ಬರು ನೀರಿನಲ್ಲಿ ಮುಳುಗಿದ್ದರು ಎನ್ನಲಾಗಿದೆ.

ಇದನ್ನು ನೋಡಿದ ಸಂಜಯ್ ಹೆದರಿಕೆಯಿಂದ ಈ ವಿಚಾರವನ್ನು ಯಾರಿಗೂ ಹೇಳದೇ ಮುಚ್ಚಿಟ್ಟಿದ್ದ ಎನ್ನಲಾಗಿದೆ. ಈ ಬಗ್ಗೆ ಸಂಜೆಯ ವೇಳೆ ಮಾಹಿತಿ ತಿಳಿದ ಮನೆಯವರು, ಸ್ಥಳೀಯರು ಅಗ್ನಿಶಾಮಕ ದಳದವರು ನಾಪತ್ತೆಯಾದವರಿಗೆ ಹುಡುಕಾಟ ನಡೆಸಿದ್ದಾರೆ. ಆದರೂ ಇಬ್ಬರು ಬಾಲಕರು ಪತ್ತೆಯಾಗಿರಲಿಲ್ಲ. ಇಂದು ಬೆಳಗ್ಗೆ ಹುಡುಕಾಟ ಮುಂದುವರಿಸಿದ ವೇಳೆ ಇಬ್ಬರ ಮೃತದೇಹ ಹೇರೂರು ರೈಲ್ವೆ ಸೇತುವೆ ಬಳಿ ಪತ್ತೆಯಾಗಿದೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply