ಕೇಸರಿ ಸನ್ಯಾಸಿಗೆ ಹಣ ಕೊಟ್ಟರೆ ತಮಗೇನು ಲಾಭ ಎಂಬ ವಾತಾವರಣ ಇತ್ತು

ಸ್ವಾಮಿ ವಿವೇಕಾನಂದರು 1893 ಸೆಪ್ಟೆಂಬರ್ 11 ರಂದು ಶಿಕಾಗೋ ಸಮ್ಮೇಳನದಲ್ಲಿ ಹಿಂದೂ ಧರ್ಮ ಎಂದರೆ ಏನು ಎನ್ನುವುದನ್ನು ಒಂದು ವಾಕ್ಯದಲ್ಲಿಯೇ ಹೇಳಿದ್ದಾರೆ-” ಧಾರ್ಮಿಕ ಸಹನೆಯನ್ನು ಎಲ್ಲ ಧರ್ಮಗಳು ಸ್ವೀಕಾರಯೋಗ್ಯ ಎಂಬುದನ್ನು ಜಗತ್ತಿಗೆ ಬೋಧಿಸಿದ ಧರ್ಮಕ್ಕೆ ಸೇರಿದವನು ನಾನು ಎಂಬ ಹೆಮ್ಮೆ ನನ್ನದು. ಪರಧರ್ಮ ಸಹಿಷ್ಣುತೆಯಲ್ಲಿ ನಮಗೆ ನಂಬಿಕೆ ಇದೆ. ಅಷ್ಟೇ ಅಲ್ಲ, ಎಲ್ಲ ಧರ್ಮಗಳೂ ಸತ್ಯ ಎಂಬುದನ್ನು ನಾವು ಒಪ್ಪುತ್ತೇವೆ. ಜಗತ್ತಿನ ಎಲ್ಲ ರಾಷ್ಟ್ರಗಳಲ್ಲಿ, ಎಲ್ಲ ಧರ್ಮಗಳಲ್ಲಿ, ಯಾರು ಹಿಂಸೆಗೆ ಒಳಗಾದರೊ ಅವರಿಗೆಲ್ಲ ಆಶ್ರಯ ನೀಡಿದ ದೇಶಕ್ಕೆ ಸೇರಿದವನು ಎಂಬ ಹೆಮ್ಮೆ ನನ್ನದು” ಎಂದು ಹೇಳಿದ್ದಾರೆ. ವಿವೇಕಾನಂದರ ಪರಿಕಲ್ಪನೆಯ ಹಿಂದೂ ಧರ್ಮದಲ್ಲಿ ಅನ್ಯಮತ ದ್ವೇಷವಿರಲಿಲ್ಲ. ಸಾಮಾಜಿಕ ಶೋಷಣೆಯ ಸಮ್ಮತಿಯಿರಲಿಲ್ಲ. ಅದಕ್ಕಾಗಿ ಅವರು, ನಾವು ಮಾನವ ವರ್ಗವನ್ನು ಎಲ್ಲಿ ವೇದಗಳು, ಬೈಬಲ್, ಕುರಾನ್ ಇಲ್ಲವೋ ಅಲ್ಲಿಗೆ ಕರೆದೊಯ್ಯಬೇಕು. ಆದರೂ ವೇದ, ಬೈಬಲ್, ಕುರಾನ್ ಐಕ್ಯತೆಯಿಂದ ಇದನ್ನು ಸಾಧಿಸಬೇಕಾಗಿದೆ. ನಮ್ಮ ಮಾತೃಭೂಮಿಯಲ್ಲಿ ಹಿಂದೂ ಮತ್ತು ಮುಸಲ್ಮಾನ ಧರ್ಮಗಳೆರಡೂ ಮಿಲನವಾಗಬೇಕು. ವೇದಾಂತದ ಮಿದುಳು, ಇಸ್ಲಾಮಿನ ದೇಹ ಇದೊಂದೇ ನಮ್ಮ ಪುರೋಗಮನಕ್ಕೆ ಹಾದಿ ಎಂದು ಹೇಳುತ್ತಿದ್ದರು. ಹಿಂದೂ ಧರ್ಮವೊಂದೇ ಶ್ರೇಷ್ಟ, ಉಳಿದ ಧರ್ಮಗಳು ಕನಿಷ್ಟ ಎಂಬ ಭಾವನೆ ಸ್ವಾಮಿ ವಿವೇಕಾನಂದರಲ್ಲಿ ಇರಲೇ ಇಲ್ಲ. ಹೀಗಾಗಿ ಅವರು ಹಿಂದೂ ಧರ್ಮದ ಕೊರತೆಗಳನ್ನು ಹೇಳಲು ಹಿಂಜರಿಯಲಿಲ್ಲ. ಶಿಕಾಗೋ ಭಾಷಣದಲ್ಲಿ ಅಮೇರಿಕಾದ ನನ್ನ ಸಹೋದರ, ಸಹೋದರಿಯರೇ ಎನ್ನುವ ಆರಂಭಿಕ ಸಾಲುಗಳು ಮಾತ್ರ ಇವತ್ತಿಗೂ ಎಲ್ಲರೂ ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ಆದರೆ ಆ ಭಾಷಣದಲ್ಲಿ ಅವರು ಇನ್ನೊಂದು ಮಾತನ್ನು ಹೇಳಿದ್ದು ಹೆಚ್ಚಿನ ಕಡೆ ಸುದ್ದಿಯಾಗಲೇ ಇಲ್ಲ. ಭಾರತಕ್ಕೆ ಮತಾಂತರ ಮಾತ್ರಕ್ಕಾಗಿ ಬರುವ ಕ್ರೈಸ್ತ ಮತದವರ ನಡೆಯನ್ನು ಆ ಭಾಷಣದಲ್ಲಿ ಟೀಕಿಸಿದ ಸ್ವಾಮಿ ವಿವೇಕಾನಂದರು ಕ್ರೈಸ್ತರಲ್ಲದವರ ಆತ್ಮವನ್ನು ಉದ್ಧರಿಸುವುದಕ್ಕೆ ಪಾದ್ರಿಗಳನ್ನು ಕಳಿಸಲು ನೀವು ಇಷ್ಟು ಕಾತರರಾಗಿದ್ದೀರಲ್ಲ, ಉಪವಾಸದಿಂದ ನರಳುತ್ತಿರುವ ಆ ಜನರ ದೇಹಗಳನ್ನು ಉಳಿಸಲು ನೀವೇಕೆ ಪ್ರಯತ್ನಿಸಬಾರದು ಎಂದು ಪ್ರಶ್ನಿಸಿದ್ದಾರೆ. ಉಪವಾಸದಿಂದ ಸತ್ತವರಿಗೆ ನೀವೇನೂ ಮಾಡಲಿಲ್ಲ ಎಂದು ಟೀಕಿಸಿದ್ದಾರೆ. ಉಪವಾಸದಿಂದ ಸಾಯುತ್ತಿರುವವರಿಗೆ ಮತಧರ್ಮವನ್ನು ನೀಡುವುದು ಅವರಿಗೆ ಮಾಡುವ ಅವಮಾನ. ಅವರಿಗೆ ತತ್ವಶಾಸ್ತ್ರವನ್ನು ಬೋಧಿಸುವುದೂ ಒಂದು ಅಪಮಾನ ಎಂದಿದ್ದಾರೆ. ವಿವೇಕಾನಂದರಿಗೆ ಮತಧರ್ಮದ ಬೋಧನೆಗಿಂತ ಜನರ ಹಸಿವು ನೀಗಿಸುವುದು ಅವರ ಆದ್ಯತೆಯಾಗಿತ್ತು. ವಿವೇಕಾನಂದರು ವಿಶ್ವಧರ್ಮದ ಪರಿಕಲ್ಪನೆಯನ್ನು ಪ್ರತಿಪಾದಿಸಿ “ಜಗತ್ತಿನಲ್ಲಿ ಎಂದಾದರೂ ಒಂದು ವಿಶ್ವಧರ್ಮವೆನ್ನುವುದು ಅಸ್ತಿತ್ವಕ್ಕೆ ಬರುವುದಾದರೆ ಅದು ಕಾಲದೇಶಗಳ ಎಲ್ಲೆಯನ್ನು ಮೀರಿರಬೇಕು. ಅದು ಹಿಂದೂ ಧರ್ಮ, ಬೌದ್ಧ, ಕ್ರೈಸ್ತ, ಮಹಮ್ಮದೀಯ ಎಂದು ಪ್ರತ್ಯೇಕವಾಗಿರದೇ ಈ ಎಲ್ಲದರ ಒಟ್ಟು ಸಾರಾಂಶವಾಗಿರಬೇಕು. ಆ ಧರ್ಮ ತನ್ನ ವೈಶಾಲ್ಯದಿಂದ ಅನಂತಬಾಹುಗಳನ್ನು ಚಾಚಿ ಯಾವ ಭೇದವೂ ಇಲ್ಲದೆ ಎಲ್ಲರನ್ನು ಆಲಂಗಿಸಿಕೊಳ್ಳುವಂತೆ ಇರಬೇಕು” ಎಂದಿದ್ದಾರೆ. ಇಂತಹ ಒಂದು ಸಾಧ್ಯತೆಯ ಅವಕಾಶ ಇಲ್ಲ ಎಂದು ಗೊತ್ತಿದ್ದರೂ ಯಾವೊಂದು ಧರ್ಮವೂ ತನಗೆ ತಾನೇ ಶ್ರೇಷ್ಟ ಮತ್ತು ಅಂತಿಮ ಎಂದು ಭಾವಿಸಬಾರದೆಂಬ ಹೊಳಹು ಇದೆ. ಸ್ವಾಮಿ ವಿವೇಕಾನಂದರು ವಿದೇಶಕ್ಕೆ ಹೋಗಿ ಅಲ್ಲಿ ದೇಣಿಗೆ ಸಂಗ್ರಹಿಸಿ ಅದರಿಂದ ಭಾರತದಲ್ಲಿರುವ ಬಡವರಿಗೆ ಸಹಾಯ ಮಾಡುವ ಉದ್ದೇಶ ಹೊಂದಿದ್ದರು ಎನ್ನುವುದು ಅವರ ಮಾತುಗಳಲ್ಲಿ ತಿಳಿಯಬಹುದಾಗಿತ್ತು. ಅವರು ಅದೇ ಶಿಕಾಗೋ ಭಾಷಣದಲ್ಲಿ “ನನ್ನ ದೇಶದಲ್ಲಿ ಕಷ್ಟದಲ್ಲಿ ನರಳುವವರಿಗೆ ಸಹಾಯವನ್ನು ಪಡೆಯಲು ಇಲ್ಲಿಗೆ ಬಂದೆ” ಎಂದು ಹೇಳಿದ್ದಾರೆ. ಆದರೆ ಕ್ರೈಸ್ತ ದೇಶದಲ್ಲಿ ಕ್ರೈಸ್ತರಲ್ಲದವರಿಗೆ ನೆರವು ಪಡೆಯುವುದು ಕಷ್ಟವಾದದ್ದು ಅವರ ಅರಿವಿಗೆ ಬಂದಿತ್ತು. ಯಾಕೆಂದರೆ ಕೇಸರಿ ಸನ್ಯಾಸಿಗೆ ಹಣ ಕೊಟ್ಟರೆ ಅದರಿಂದ ತಮಗೇನು ಲಾಭ ಎಂದು ಅಲ್ಲಿ ಹಲವರ ಚಿಂತನೆಯಾಗಿತ್ತು. ಅದೇ ಭಾರತಕ್ಕೆ ತೆರಳುವ ಪಾದ್ರಿಗಳಿಗೆ ಉದಾರ ದೇಣಿಗೆ ಹರಿದುಬರುತ್ತಿತ್ತು. ಹಾಗೆಂದು ಅವರು ಕ್ರೈಸ್ತರನ್ನಾಗಲಿ, ಕ್ರೈಸ್ತಮತವನ್ನಾಗಲಿ ದ್ವೇಷಿಸಲಿಲ್ಲ. ಆಧ್ಯಾತ್ಮ ಎನ್ನುವುದು ಮೊದಲ ಆದ್ಯತೆಯಾಗುವ ಬದಲು ಅನ್ನಮೂಲದ ಅಗತ್ಯವನ್ನು ಅವರು ಪ್ರತಿಪಾದಿಸಿದ್ದರು. ಒಟ್ಟಿನಲ್ಲಿ ವಿವೇಕಾನಂದರು ಹಾಗೂ ಸಾವರ್ಕರ್ ಹುಟ್ಟಿದ, ಬೆಳೆದ ಮತ್ತು ನಡೆದಾಡಿದ ಈ ಪುಣ್ಯಭೂಮಿ ಭಾರತದಲ್ಲಿಯೇ ನಮ್ಮ ಜನ್ಮವಾಗಿರುವುದು ನಮ್ಮ ಪುಣ್ಯ ಮತ್ತು ಭಾಗ್ಯ. ಅವರ ಬಗ್ಗೆ ಬರೆಯುವ ಈ ಸಂದರ್ಭದಲ್ಲಿ ಬಹಳಷ್ಟು ವಿಚಾರಗಳು ತಿಳಿಯುವ, ಮೈಗೂಡಿಸುವ ಅವಕಾಶ ಸಿಕ್ಕಿತು. ಅವರು ಭಾರತಾಂಬೆಗೆ ಮಾಡಿದ ಸೇವೆಯ ಒಂದು ಶೇಕಡಾದಷ್ಟಾದರೂ ಮಾಡುವ ಯೋಗ್ಯತೆ ನಮ್ಮಲ್ಲಿ ಬಂದರೆ ಅದು ನಮ್ಮ ಸುಕೃತದ ಫಲವಲ್ಲದೆ ಬೇರೆ ಏನೂ ಅಲ್ಲ. ಧನ್ಯೋಸ್ಮಿ…

Leave a Reply