ಕಾಪು ಕಡಲಬ್ಬರ ಹೆಚ್ಚಾಗಿ ಮನೆಗಳು ಮತ್ತು ತೆಂಗಿನಮರಗಳು ಸಮುದ್ರ ಪಾಲಾಗುವ ಭೀತಿ

ಕಾಪು ಪುರಸಭಾ ವ್ಯಾಪ್ತಿಯ ಪೊಲಿಪು ಸಮುದ್ರ ಕಿನಾರೆ ಪ್ರದೇಶದಲ್ಲಿ ಕಡಲ್ಕೊರೆತಗಾಗಿ ಹಿಂದೆ ನಿರ್ಮಿಸಿದ್ದ ತಡೆಗೋಡೆಯನ್ನು ಹೊಸ ತಡೆಗೋಡೆ ನಿರ್ಮಿಸುವ ಭರವಸೆಯೊಂದಿಗೆ ತೆರವುಗೊಳಿಸಿರುವುದರಿಂದ ಸ್ಥಳೀಯ ನಿವಾಸಿಗಳು ಆತಂಕಕ್ಕೊಳಗಾಗಿದ್ದು, ಈ ಪ್ರದೇಶಕ್ಕೆ ಸ್ಥಳೀಯರ ದೂರಿನ ಹಿನ್ನಲೆಯಲ್ಲಿ ಮಾಜಿ ಸಚಿವ ವಿನಯಕುಮಾರ್ ಸೊರಕೆ ಭಾನುವಾರ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ತಡೆಗೋಡೆ ತೆಗೆದು, ಹೊಸ ತಡೆಗೋಡೆ ನಿರ್ಮಿಸುವ ಕಾಮಗಾರಿ ನಡೆಸುವ ಭರವಸೆಯೊಂದಿಗೆ ರಸ್ತೆ ನಿರ್ಮಿಸಲಾಗಿದ್ದು ಈಗ ಕಾಮಗಾರಿಯೇ ನಿಂತು ಹೋಗಿದೆ. ಎಪ್ರಿಲ್ – ಮೇ ತಿಂಗಳಲ್ಲಿ ಮಳೆ ಬಂದಲ್ಲಿ ಕಡಲಬ್ಬರ ಹೆಚ್ಚಾಗಿ ಈ ಭಾಗದ ಮನೆಗಳು ಮತ್ತು ತೆಂಗಿನಮರಗಳು ಸಮುದ್ರ ಪಾಲಾಗುವ ಭೀತಿ ಎದುರಾಗಿದೆ.  ಇದರಿಂದ ಸಮುದ್ರ ತೀರದ ನಿವಾಸಿಗಳು ಆತಂಕ ಎದುರಿಸುವಂತಾಗಿದೆ. ಈ ಬಗ್ಗೆ ಶಾಸಕರು, ಸಂಸದರು, ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಇಲಾಖೆ ತುರ್ತಾಗಿ ಸ್ಪಂಧಿಸಿ ಈ ಬಗ್ಗೆ ಸೂಕ್ತ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೂಡಲೇ ತೆಗೆದುಕೊಂಡು ಶೀಘ್ರ ತಡೆಗೋಡೆ ನಿರ್ಮಿಸಿಕೊಡುವಂತೆ ವಿನಯಕುಮಾರ್ ಸೊರಕೆ ಆಗ್ರಹಿಸಿದರು.

ಉಡುಪಿ ಜಿಲ್ಲಾಧಿಕಾರಿ, ಮೀನುಗಾರಿಕಾ ಮತ್ತು ಬಂದರು ಇಲಾಖೆ ಅಧಿಕಾರಿಗಳು ಮತ್ತು ಗುತ್ತಿಗೆದಾರರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ ಅವರು, ಕೂಡಲೇ ಕಾಮಗಾರಿ ಆರಂಭಿಸುವಂತೆ ಒತ್ತಾಯಿಸಿದರು. ಅಧಿಕಾರಿಗಳು ಎರಡು ದಿನದಲ್ಲಿ ಕಾಮಗಾರಿ ಆರಂಭಿಸುವುದಾಗಿ ಭರವಸೆ ನೀಡಿದ್ದು ನೀಡಿದ ಭರವಸೆಯಂತೆ ಕಾಮಗಾರಿ ಪ್ರಾರಂಭಿಸದಿದ್ದಲ್ಲಿ ಸ್ಥಳೀಯ ನಿವಾಸಿಗಳು, ಮೀನುಗಾರರು, ಮೊಗವೀರ ಮುಖಂಡರು, ಜನಪ್ರತಿನಿಧಿಗಳು, ಪುರಸಭೆ ಸದಸ್ಯರು ಹಾಗೂ ಪಕ್ಷದ ಕಾರ್ಯಕರ್ತರೊಂದಿಗೆ ಸೇರಿ ಧರಣಿ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.

ಕಾಪು ಪುರಸಭಾ ಸದಸ್ಯೆ ರಾಧಿಕಾ ಸುವರ್ಣ, ಪೊಲಿಪು ಮೊಗವೀರ ಮಹಾಸಭಾದ ಅಧ್ಯಕ್ಷ ವಿಜಯ ಕರ್ಕೇರ, ಸ್ಥಳೀಯ ಪ್ರಮುಖರಾದ ವಾಮನ ಸುವರ್ಣ, ರಾಜೇಶ್ ಮೆಂಡನ್, ಮನೋಜ್ ಪುತ್ರನ್, ಪ್ರಭಾಕರ ಕುಂದರ್, ರವಿ ಮೆಂಡನ್, ಸೊರಕೆ ಅವರ ಆಪ್ತ ಕಾರ್ಯದರ್ಶಿ ಅಶೋಕ್ ನಾಯರಿ, ಹಾಗೂ ನೂರಾರು ಮಂದಿ ಸ್ಥಳೀಯರು ಉಪಸ್ಥಿತರಿದ್ದರು.

Leave a Reply