ಉಡುಪಿ ಜಿಲ್ಲೆಯಲ್ಲಿ ಮುಗಿಯದ ಹಿಜಾಬ್ ವಿವಾದ: ಕುಂದಾಪುರ ಸರ್ಕಾರಿ ಕಾಲೇಜಿನಲ್ಲೂ ವಿದ್ಯಾರ್ಥಿನಿಯರ ಕಿರಿಕ್

ಉಡುಪಿ, ಫೆ.3:ಉಡುಪಿಯಲ್ಲಿ ಹಿಜಾಬ್ ವಿವಾದ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ನಗರದ ಸರ್ಕಾರಿ ಮಹಿಳಾ ಪಿಯು ಕಾಲೇಜಿನಿಂದ ಹಿಜಬ್ ಕಿರಿಕ್ ಕುಂದಾಪುರ ಸರಕಾರಿ ಪಿಯು ಕಾಲೇಜಿಗೆ ಶಿಫ್ಟ್ ಆಗಿದೆ. ಹಿಜಾಬ್ ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿನಿಯರನ್ನು ಪ್ರಾಂಶುಪಾಲರೇ ಗೇಟಿನ ಬಳಿ ನಿಂತು ತಡೆದ ಘಟನೆ ನಡೆದಿದೆ.

ಸರ್ಕಾರದ ಮುಂದಿನ ಆದೇಶ ಆಗುವತನಕ ಕಾಲೇಜಿಗೆ ಹಿಜಾಬ್ ಧರಿಸಿ ಬರಬಾರದು ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಬೋರ್ಡ್ ಆದೇಶ ಹೊರಡಿಸಿದೆ. ಶಿಕ್ಷಣ ಸಚಿವರು ಇದೇ ಹೇಳಿಕೆಯನ್ನು ಕೊಟ್ಟಿದ್ದರು ಅದರಂತೆ ಹಿಜಾಬ್ ಧರಿಸಲು ಶಾಲೆ ಆಡಳಿತ ಮಂಡಳಿ ಮತ್ತು ಪ್ರಾಂಶುಪಾಲರು ಅವಕಾಶ ಕೊಡುತ್ತಿಲ್ಲ.  ಕುಂದಾಪುರ ಸರ್ಕಾರಿ ಕಾಲೇಜಿನಲ್ಲಿ ಪ್ರಾಂಶುಪಾಲರ ನೇತೃತ್ವದಲ್ಲಿ ಮುಸಲ್ಮಾನ ಸಮುದಾಯದ ಪೋಷಕರನ್ನು ಶಾಸಕರು ಮನವೊಲಿಸಲು ಯತ್ನಿಸಿದ್ದು ಇದು ವಿಫಲವಾಗಿದೆ. ಇಂದು ಬುರ್ಕಾ ಮತ್ತು ಹಿಜಬ್ ಧರಿಸಿ ಕಾಲೇಜಿಗೆ ಬಂದ ಮುಸ್ಲಿಂ ವಿದ್ಯಾರ್ಥಿನಿಯರನ್ನು ಕಾಲೇಜಿನ ಗೇಟ್ ಬಳಿ ಪ್ರಾಂಶುಪಾಲರು ತಡೆದರು. ಕ್ಲಾಸಿಗೆ ತೆರಳದಂತೆ ಪ್ರಾಂಶುಪಾಲರಿಂದ ಹಿಜಾಬ್ ಧಾರಿಗಳಿಗೆ ತಡೆ ನೀಡಲಾಯ್ತು.
ಹಿಜಾಬ್ ಕಳಚಿ ಕ್ಲಾಸಿಗೆ ಬರುವಂತೆ ಪ್ರಿನ್ಸಿಪಾಲ್ ಸೂಚನೆ ನೀಡಿದರು. ಗೇಟ್ ಬಳಿ ಪ್ರಾಂಶುಪಾಲರ ಜೊತೆ ವಿದ್ಯಾರ್ಥಿನಿಯರು ವಾಗ್ವಾದ ನಡೆಸಿ,  ಸರಕಾರದ ಆದೇಶದಲ್ಲಿ ಕುಂದಾಪುರ ಕಾಲೇಜು ಉಲ್ಲೇಖವಿಲ್ಲ. ನಾವು ಒಂದುವರೆ ವರ್ಷದಿಂದ ಹಿಜಾಬ್ ಧರಿಸಿ ಕಾಲೇಜಿಗೆ ಬರುತ್ತಿದ್ದೇವೆ ಎಂದು ವಾದಿಸಿದರು. ಸರಕಾರ ಇಡೀ ರಾಜ್ಯಕ್ಕೆ ಸುತ್ತೋಲೆ ಹೊರಡಿಸಿದೆ ಎಂದು ಪ್ರಾಂಶುಪಾಲರು ಉತ್ತರಿಸಿ ಕಾಲೇಜು ಒಳಕ್ಕೆ ಬಿಡದೆ ವಾಪಸ್ ಕಳುಹಿಸಿದ್ದಾರೆ. ಇದೇ ಕಾಲೇಜಿಗೆ ನೆನ್ನೆ ನೂರಾರು ವಿದ್ಯಾರ್ಥಿಗಳು ಕೇಸರಿ ಶಾಲು ತೊಟ್ಟು ಬಂದಿದ್ದರು, ಇಂದು ಅವರೆಲ್ಲ ಸಮವಸ್ತ್ರದಲ್ಲಿ ಕಾಲೇಜಿಗೆ ಬಂದಿದ್ದಾರೆ.

Leave a Reply